Sheni
ನಾನು ಯಕ್ಷಗಾನದ ಕೇಳುಗನಾಗಿ, ಬಹಳವಾಗಿ ಮೆಚ್ಚಿಕೊಂಡದ್ದು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯನ್ನು. ಸುಮಾರು ೭ ವರ್ಷಗಳ ಹಿಂದೆ ನನ್ನ ಊರಿನ ಸಮೀಪದ ಹಳ್ಳಿಯೊಂದರಲ್ಲಿ ತಾಳಮದ್ದಳೆಯೊಂದಕ್ಕೆ ಕೇಳುಗನಾಗಿ ಹೋಗಿದ್ದೆ. "ಕರ್ಣಾರ್ಜುನ" ಆವತ್ತಿನ ಪ್ರಸಂಗ. ಶ್ರೀ ಪೆರ್ಲ ಕೃಷ್ಣ ಭಟ್ಟರು ಕೃಷ್ಣ, ಶೇಣಿಯವರು ಕರ್ಣ. ಸುಮಾರು ೫ ಘಂಟೆಗಳ ಕಾಲ ನಡೆದ ಈ ತಾಳಮದ್ದಳೆಯಲ್ಲಿ ಅವರಿಬ್ಬರ ಮಾತುಗಾರಿಕೆಯ ವೈಭವವನ್ನು ಸವಿಯುವ ಸದವಕಾಶ ನಮಗೆ ಒದಗಿ ಬಂದಿತ್ತು. ಇದಲ್ಲದೆ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನವನ್ನೂ ಒಂದು ಬಾರಿ ನೋಡಿದ್ದೆ. ಅದು ಪ್ರಾಯಶಃ ಅವರ ಕೊನೆಯ ವೇಷಗಾರಿಕೆಯಾಗಿರಬೇಕು.
ಬಹಳ ಭೋದಪ್ರದವಾದ, ನವಿರಾದ ಹಾಸ್ಯವುಳ್ಳ ಪ್ರಾದೇಶಿಕ ಕಾಸರಗೋಡು ಕನ್ನಡದ ಅರ್ಥಗಾರಿಕೆ ಅವರದು. "ಗಧಾಯುದ್ಧ" ದ ದುರ್ಯೋಧನ, "ಮಾಗಧ ವಧೆ" ಯ ಮಾಗಧ, ಕರ್ಣಾರ್ಜುನದ ಕರ್ಣನಾಗಿ, "ಕವಿರತ್ನ ಕಾಳಿದಾಸ"ದ ಕಾಳಿದಾಸನಾಗಿ ಅವರ ಮಾತುಗಾರಿಕೆ ಒಂದು ವಿಶಿಷ್ಟ ಛಾಪನ್ನು ಉಳಿಸುವಂತಹುದು. ಕರ್ಣಾರ್ಜುನದ "ಏನು ಸಾರಥಿ ಸರಳು ಪಾಂಡವ ಸೇನೆಯನು ಗೆಲಲಹುದೆ......" ಎಂಬ "ಪದ" ವೊಂದರ ನಂತರದ ಅರ್ಥ ನನಗೆ ಈಗಲೂ ಅಚ್ಚಳಿಯದೆ ನೆನಪಿನಲ್ಲಿದೆ.
ಒಳ್ಳೆ ಅರ್ಥಧಾರಿ ಮಾತ್ರವಲ್ಲದೆ ಶೇಣಿಯವರು ಹರಿಕಥೆಗಳನ್ನೂ ಅದ್ಭುತವಾಗಿ ನಡೆಸಬಲ್ಲವರಾಗಿದ್ದರು. ಹೀಗೆ ಬಹುಮುಖ ಪ್ರತಿಭೆಯುಳ್ಳಮಹಾನುಭಾವರ ಅಗಲಿಕೆ ನಿಜಕ್ಕೂ ತುಂಬಲಾರದ ನಷ್ಟ.
ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ.